Contact For Add

ಕಳಪೆ ಆಹಾರ ಪದಾರ್ಥಗಳು ಪೂರೈಕೆಯಾದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಕೆ. ಗೋಪಾಲಯ್ಯ

ಕಲಬುರಗಿ.ಜೂನ್.11(ಕ.ವಾ)-ಜಿಲ್ಲೆಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ಆಹಾರ ಪದಾರ್ಥಗಳ ಪೂರೈಕೆ ಮಾಡುತ್ತಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಎಲ್ಲಿಯಾದರೂ ಕಳಪೆ ಆಹಾರ ಪದಾರ್ಥಗಳ ವಿತರಿಸುತ್ತಿರುವುದು  ಕಂಡು ಬಂದರೆ, ಮೇಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ಗ್ರಾಹಕರು ತರಬೇಕು ಎಂದು ಹೇಳಿದರು. 

ಕೋವಿಡ್-19 ಸಂದರ್ಭದಲ್ಲಿ ಯಾರೂ ಕೂಡ ಉಪವಾಸ ಬೀಳದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಕಷ್ಟು ಆಹಾರ ಪದಾರ್ಥಗಳ ಬಿಡುಗಡೆಗೆ ಕ್ರಮಕೈಗೊಂಡಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಾಗೂ ಆತ್ಮನಿರ್ಭರ್ ಭಾರತ್ ಯೋಜನೆಯಡಿ ಪಡಿತರ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಅವರು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ ಆಹಾರ ನಿರೀಕ್ಷಕ ಕೃಷ್ಣ ಅವರು, ಆತ್ಮ ನಿರ್ಭರ ಭಾರತ್ ಯೋಜನೆಯಡಿ 2020ರ ಮೇ ಮತ್ತು ಜೂನ್ ಮಾಹೆಗಳಿಗೆ ಒಟ್ಟು 32,512 ಫಲಾನುಭವಿಗಳಿದ್ದು, ಹÀಂಚಿಕೆಯಾದ 3251.180 ಮೆಟ್ರಿಕ್ ಟನ್ ಅಕ್ಕಿ ಹಾಗೂ 206.140 ಮೆಟ್ರಿಕ್ ಟನ್ ಕಡಲೆಕಾಳು ಎತ್ತುವಳಿಯಾಗಿದ್ದು, ವಿತರಣೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 2020ರ ಜೂನ್ ಮಾಹೆಗೆ 9385 ಮೆಟ್ರಿಕ್ ಟನ್ ಅಕ್ಕಿ, 1096 ಮೆಟ್ರಿಕ್ ಟನ್ ತೊಗರಿಬೇಳೆ ಹಂಚಿಕೆಯಾಗಿದ್ದು, ಅಕ್ಕಿ ಪೂರ್ತಿ ಎತ್ತವಳಿಯಾಗಿದ್ದರೆ, ತೊಗರಿ ಬೇಳೆ 701.761 ಮೆಟ್ರಿಕ್ ಟನ್ ಮಾತ್ರ ಎತ್ತುವಳಿಯಾಗಿದೆ ಎಂದು ಅಂಕಿ-ಆಂಶ ವಿವರಿಸಿದರು.

ಕಾನೂನು ಮಾಪನಾ ಶಾಸ್ತ್ರ ಇಲಾಖೆ ಅಧಿಕಾರಿ ರಫೀಕ್ ಲಾಡಜಿ ಅವರು ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ತಪಾಸಣೆ ಕೈಗೊಂಡಾಗ ಹೆಚ್ಚಿನ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್, ದಿನಸಿ ಪದಾರ್ಥಗಳು ಮುಂತಾದವುಗಳನ್ನು ಮಾರುತ್ತಿದ್ದುದು ಬೆಳಕಿಗೆ ಬಂದಿದ್ದು,  ಜಿಲ್ಲೆಯಲ್ಲಿ 510 ಮೆಡಿಕಲ್ ಶಾಪ್/ಜನರಲ್ ಶಾಪ್/ ಕಿರಾಣಾ ಹಾಗೂ ಸಗಟು ಅಂಗಡಿಗಳ ಮೇಲೆ  ತಪಾಸಣೆ ಮಾಡಿ, 61 ಮೊಕದ್ದಮೆ ಹೂಡಿ, 2,48,500 ರೂಪಾಯಿ ಆಭಿಸಂಧಾನ ಶುಲ್ಕ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಶಾಸಕರಾದ ಸುಭಾಷ್ ಗುತ್ತೇದಾರ್ ಅವರು ಮಾತನಾಡಿ, ಈ ಹಿಂದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅಕ್ಕಿ ಲಾರಿಯನ್ನು ಖುದ್ದಾಗಿ ನಾನೇ ಹಿಡಿದುಕೊಟ್ಟಿದ್ದೆ. ಆದರೆ ಆಗಿನ ಅಧಿಕಾರಿಯೊಬ್ಬರು ಜಿಲ್ಲೆಯಲ್ಲಿನ ಪಡಿತರ ಅಂಗಡಿಗಳಿಗೆ ಪೂರೈಸಲಾಗುತ್ತಿದೆ ಎಂದು ಸುಳ್ಳು ಹೇಳಿ ಲಾರಿಯನ್ನು ಬಿಡುಗಡೆ ಮಾಡಿದರು. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.  ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಗೋಪಾಲಯ್ಯ ಅವರು, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಾಲಾಜಿ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ,  ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೋಭಾ ಸಿದ್ದು ಸಿರಸಗಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರೂ ಆದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಶರತ್. ಬಿ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ, ನಿಯಮಿತದ ಜನರಲ್ ಮ್ಯಾನೇಜರ್ ಚಂದ್ರಕಾಂತ್, ಆಹಾರ ಇಲಾಖೆಯ ಉಪನಿರ್ದೇಶಕ ಡಿ.ಎಂ. ಪಾಣಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಕಳಪೆ ಆಹಾರ ಪದಾರ್ಥಗಳು ಪೂರೈಕೆಯಾದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಕೆ. ಗೋಪಾಲಯ್ಯ ಕಳಪೆ ಆಹಾರ ಪದಾರ್ಥಗಳು ಪೂರೈಕೆಯಾದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಕೆ. ಗೋಪಾಲಯ್ಯ  Reviewed by MediaMind24x7 Team on June 11, 2020 Rating: 5

No comments:

Powered by Blogger.