Contact For Add

ಮಗನಿಗಾಗಿ ತೆರೆದ ಶಾಲೆಯಲ್ಲೀಗ ನೂರಾರು ಮಕ್ಕಳು

‘ಮಕ್ಕಳ ಭವಿಷ್ಯಕ್ಕಾಗಿ ತಾಯಂದಿರು ಎಂಥ ತ್ಯಾಗಕ್ಕೂ ಸಿದ್ಧ’ ಎಂಬುದನ್ನು ನಂದಿನಿ ಲೇಔಟ್ನ  ಕೆ. ರಾಧಾ ತೋರಿಸಿಕೊಟ್ಟಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಅಸಾಧ್ಯವಾದದ್ದು ಏನು ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಎಂ.ಬಿ.ಎ, ಎಂ.ಎ ಪದವೀಧರರರಾದ ಇವರು, ಕೈ ತುಂಬ ಸಂಬಳ ಬರುತ್ತಿದ್ದ ಕೆಲಸವನ್ನು ತ್ಯಜಿಸಿ ಮಗನಿಗಾಗಿ ಸಣ್ಣ ಶಾಲೆಯೊಂದನ್ನು ಆರಂಭಿಸಿದ್ದರು. ಆ ಶಾಲೆಯೇ ಇಂದು ನೂರಾರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
-----------------------------------------

ನಂದು ಪ್ರಾಥಮಿಕ ಶಿಕ್ಷಣ ಪ್ರಾರಂಭವಾಗಿದ್ದು ನಂದಿನಿ ಲೇಔಟ್ನ ಬಸವೇಶ್ವರ ವಿದ್ಯಾಸಂಸ್ಥೆ ಶಾಲೆಯಲ್ಲಿ. 8ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದೆ. ನಂತರ ಪಾಂಚಿಜನ್ಯ ಶಾಲೆಗೆ ಸೇರಿದೆ. ನಂತರ ಅಮ್ಮಣ್ಣಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಪಡೆದೆ. ನಂತರ ಭಾರತಿ ವಿದ್ಯಾಭವನದಲ್ಲಿ ಸ್ನಾತಕ ಪದವಿ ಮಾಡಿದೆ.
16ನೇ ವಯಸ್ಸಿನಲ್ಲೇ ಡಿಪ್ಲೋಮಾ ಇನ್ ಬ್ಯೂಟಿಷಿಯನ್ ಥೆರಪಿ ಕೋರ್ಸ್ ಮಾಡಿದೆ. ಅದರಿಂದ ಮೊದಲ ಬಾರಿಗೆ 8 ರೂಪಾಯಿ ಸಂಪಾದಿಸಿದ್ದೆ. ಅದನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಂದಿನಿಂದಲೇ ವೈಯಕ್ತಿಕವಾಗಿ ದುಡಿದು, ಪೋಷಕರಿಗೆ ಹೊರೆಯಾಗದಂತೆ ಇರಬೇಕೆಂಬ ಮನೋಭಾವನೆ ಬೆಳೆಯಿತು. ಅದುವೇ ನನ್ನ ಸಾಧನೆಗೆ ಮೆಟ್ಟಿಲು ಆಯಿತು.
ಆರಂಭದಲ್ಲಿ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದೆ. ಅದು ಹೊಂದಾಣಿಕೆ ಆಗಲಿಲ್ಲವೆಂದು ದಿಗ್ವಿಜಯ ಎಂಟರ್ ಪ್ರೈಸಸ್ನಲ್ಲಿ ಲೆಕ್ಕ ಅಧಿಕಾರಿ ಆಗಿ ಸೇರಿದೆ. ಅಲ್ಲಿ ತಿಂಗಳಿಗೆ 2,500 ಸಿಗುತ್ತಿತ್ತು. ಕಚೇರಿಗೆ ಹೋಗುವುದು ಸ್ವಲ್ಪ ತಡವಾದರೂ ಸಂಬಳ ಕಡಿತ ಮಾಡುತ್ತಿದ್ದರು. ಅಲ್ಲಿಂದ,  ‘ಟೆಕ್ಸ್ ಪೋರ್ಟ್ ಓವರ್ ಸೀಸ್’ ಕಂಪನಿಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತು. ಆ ಕೆಲಸ ಮಾಡುತ್ತಲೇ ಕೆಎಸ್ಓ ಯೂನಿವರ್ಸಿಟಿಯಲ್ಲಿ ಫೈನಾನ್ಸ್ ವಿಭಾಗದಲ್ಲಿ ಎಂ.ಬಿ.ಎ ಪದವಿ ಪಡೆದೆ. ನಂತರ, ಮದುವೆ ಮಾಡಿದರು. ಮಗುವೂ ಆಯಿತು.
ಕೆಲಸದ ಒತ್ತಡದಲ್ಲಿ ಮಗುವಿನ ಆರೈಕೆ ಮಾಡುವುದು ಕಷ್ಟವಾಯಿತು. ಅವಾಗಲೇ ಕೆಲಸ ಬಿಟ್ಟು ಮಗುವಿಗೆ ಹೆಚ್ಚು ಸಮಯ ನೀಡಿದೆ. ಅದೇ ವೇಳೆ ಕುಟುಂಬದಲ್ಲಿ ಭಿನಾಭಿಪ್ರಾಯ ಉಂಟಾಗಿ  ಒಬ್ಬಂಟಿಯಾದೆ. ಆಗ ನನ್ನ ತಾಯಿ, ‘ನೀನು ಮಗುವನ್ನೂ ನೋಡಿಕೊಳ್ಳಬೇಕು. ಜತೆಗೆ ಕೆಲಸವನ್ನೂ ಮಾಡಬೇಕು. ಅದಕ್ಕಾಗಿ ಶಾಲೆಯೊಂದನ್ನು ತೆರೆಯುವುದು ಸೂಕ್ತ. ನಿನ್ನ ಮಗುವಿನ ಜತೆಗೆ ನೂರಾರು ಮಕ್ಕಳ ಜತೆ ಬೆರೆಯಬಹುದು’ ಎಂದು ಸಲಹೆ ನೀಡಿದರು.
ಅವರ ಮಾತಿನಂತೆ ನನ್ನ ಮಗು 6 ತಿಂಗಳು ಇರುವಾಗಲೇ, ತಾಯಿಯ ಮನೆಯ ಚಿಕ್ಕ ಜಾಗದಲ್ಲೇ ‘ಗುರುಕುಲಂ ಕಿಡ್ಜೆ’ ಪ್ರೀ ಸ್ಕೂಲ್ ಪ್ರಾರಂಭಿಸಿದೆ. ಅದಕ್ಕೆ ಈಗ 10 ವರ್ಷಗಳ ಸಂಭ್ರಮ. ಮೊದಲಿಗೆ ನನ್ನ ಮಗ ಸೇರಿ 17 ಮಕ್ಕಳು ಇದ್ದರು. ಈಗ ಪ್ರತಿ ವರ್ಷ 150 ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಉಚಿತ ಪ್ರವೇಶ ನೀಡಿದ್ದೇವೆ. 16 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಮಕ್ಕಳಿಗೆ ಶಿಕ್ಷಣ ನೀಡಬೇಕಾದರೆ ನುರಿತ ಶಿಕ್ಷಕರು ಬೇಕು. ಹಲವು ಶಾಲೆಗಳಲ್ಲಿ ಅಂಥ ಶಿಕ್ಷಕರ ಕೊರತೆ ಇದೆ. ಅದೇ ಕಾರಣಕ್ಕೆ ಶಿಕ್ಷಕಿಯರ ತರಬೇತಿ ಸಂಸ್ಥೆ’ ಪ್ರಾರಂಭಿಸಿದ್ದೇವೆ. ಈಗಾಗಲೇ ನಾಲ್ಕು ಬ್ಯಾಚ್ ಮುಗಿದಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿದ 45 ಮಹಿಳೆಯರು ತರಬೇತಿ ಪಡೆದಿದ್ದಾರೆ. ಅವರಲ್ಲಿ ಶೇ 90ರಷ್ಟು ಮಹಿಳೆಯರಿಗೆ ಕೆಲಸ ಕೊಡಿಸಿದ್ದೇವೆ. ಕೆಲವರು ಸ್ವತಃ ಶಾಲೆಯನ್ನೇ ಆರಂಭಿಸಿದ್ದಾರೆ. ನನ್ನ ಮಗನ ಹೆಸರಿನಲ್ಲಿ “ಜೀವನ್ ಫೌಂಡೇಶನ್’ ಆರಂಭಿಸಿದ್ದೇನೆ. ಅದರಡಿ ಹೊಸದಾಗಿ ಶಾಲೆಯೊಂದನ್ನು ಆರಂಭಿಸುತ್ತಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಲಿವೆ. ನನ್ನ ಎಲ್ಲ ಕೆಲಸಕ್ಕೂ ತಂದೆ ಸಿ.ಕೃಷ್ಣಪ್ಪ, ತಾಯಿ ಮಂಗಳಗೌರಿ, ಅಕ್ಕ-ಭಾವ  ನನಗೆ ನೆರವಾಗುತ್ತಿದ್ದಾರೆ.

ಛಲವಿದ್ದರೆ ಎಲ್ಲವೂ ಸಾಧ್ಯ : 
ಮನೆಯೊಳಗೆ ಹಾಗೂ ಹೊರಗಡೆ ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಕಷ್ಟ ಅನುಭವಿಸುತ್ತಾರೆ. ಅದೇ ಕಷ್ಟವನ್ನು ಛಲವಾಗಿ ಪರಿಗಣಿಸಿ ಮುನ್ನಡೆದರೆ ಯಶಸ್ಸು ಖಚಿತ. ಯಾವುದೇ ಕೆಲಸವಾದರೂ ಶ್ರದ್ಧೆಯಿಂದ ಮಾಡಬೇಕು. ಏನೇ ಕಷ್ಟ ಬಂದರೂ ಹೆದರಬಾರದು. ಸಾಧನೆ ಮಾಡಿದ ಮಹಿಳೆಯರು, ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅವಾಗಲೇ ಎಲ್ಲ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ.
                                                                                                     - ಕೆ. ರಾಧಾ
ಮಗನಿಗಾಗಿ ತೆರೆದ ಶಾಲೆಯಲ್ಲೀಗ ನೂರಾರು ಮಕ್ಕಳು ಮಗನಿಗಾಗಿ ತೆರೆದ ಶಾಲೆಯಲ್ಲೀಗ ನೂರಾರು ಮಕ್ಕಳು Reviewed by MediaMind24x7 Team on March 24, 2018 Rating: 5

No comments:

Powered by Blogger.