Contact For Add

ಕನ್ನಡ, ಮರಾಠಿ ಬಗ್ಗೆ ಡಾ. ಪಾಟೀಲ ಪುಟ್ಟಪ್ಪ ಪತ್ರ



ಡಾ. ಪಾಟೀಲ ಪುಟ್ಟಪ್ಪ

ಈಗ ಮಲಪ್ರಭಾ ಆಣೆಕಟ್ಟಿನಲ್ಲಿ ಮುಳುಗಿರುವ ಸವದತ್ತಿ ತಾಲೂಕಿನ ಗುರ್ಲಹೊಸೂರ ಗ್ರಾಮವು 1916 ರಲ್ಲಿ ಭಾರೀ ಮಹತ್ವದ ಸ್ಥಳವಾಗಿದ್ದಿತು. ಮಹಾರಾಷ್ಟ್ರದಿಂದ ಅನೇಕ ಮಹತ್ವದ ಜನರು ಅಲ್ಲಿಗೆ ಬಂದು ಹೋಗುತ್ತಿದ್ದರು.

ಆ ಗ್ರಾಮದಲ್ಲಿ 1916 ರಲ್ಲಿ ಕರ್ನಾಟಕ ರಾಜಕೀಯ ಪರಿಷತ್‍ನ್ನು ಕರೆದು, ಆ ಪರಿಷತ್ತಿಗೆ ಲೋಕಮಾನ್ಯ ಬಾಳ ಗಂಗಾಧರ ಟಿಳಕರನ್ನು ಆಮಂತ್ರಿಸಿದ್ದರು. ಆ ಸಮ್ಮೇಳನ ಬಗ್ಗೆ ನಮ್ಮ ಕರ್ನಾಟಕ ಕೇಸರಿ ಗಂಗಾಧರರಾವ ದೇಶಪಾಂಡೆ ಸ್ವಾಗತಾಧ್ಯಕ್ಷರಾಗಿದ್ದರು. ಲೋಕಮಾನ್ಯ ಟಿಳಕರು ಬಂದಿದ್ದ ಆ ಸಭೆಯಲ್ಲಿ ಗಂಗಾಧರರಾವ ದೇಶಪಾಂಡೆ ಅವರು ಸ್ವಾಗತ ಭಾಷಣ ಮಾಡಲು ಎದ್ದು ನಿಂತು ಟಿಳಕರನ್ನು ಮರಾಠಿಯಲ್ಲಿ ಪರಿಚಯ ಮಾಡಿಕೊಡಲು ಆರಂಭಿಸಿದರು.
ಆಗ ಲೋಕಮಾನ್ಯ ಟಿಳಕರು ಗಂಗಾಧರರಾವ ದೇಶಪಾಂಡೆ ಅವರನ್ನು ತಡೆದು ನಿಲ್ಲಿಸಿ “ಏಕೆ ನಿಮಗೆ ನಿಮ್ಮ ಭಾಷೆ ಇಲ್ಲವೆ ? ಇಲ್ಲಿ ನೆರೆದಿರುವ ಹೆಚ್ಚು ಜನರಿಗೆ ಕನ್ನಡ ಭಾಷೆ ತಿಳಿಯುವುದಲ್ಲದೆ ಮರಾಠಿ ಭಾಷೆ ತಿಳಿಯುವುದಿಲ್ಲ. ನೀವು ನನ್ನನ್ನು ಕನ್ನಡದಲ್ಲಿ ಪರಿಚಯ ಮಾಡಿಕೊಡಿರಿ” ಎಂದು ಹೇಳಿದರು.
ಲೋಕಮಾನ್ಯ ಬಾಳ ಗಂಗಾಧರ ಟಿಳಕರು ತಮ್ಮ ಭಾಷಣವನ್ನು ಆರಂಭಿಸಿ “ಒಂದಾನೊಂದು ಕಾಲಕ್ಕೆ ಕನ್ನಡ ಹಾಗೂ ಮರಾಠಿ ಜನರು ಆಡುತ್ತಿದ್ದ ಭಾಷೆ ಒಂದೇ ಒಂದು ಆಗಿದ್ದಿತು. ಅದು ಕನ್ನಡವಾಗಿದ್ದಿತು ಎಂದು ಹೇಳಿದರು.
ಈಗ ರಾಜ್ಯ ಪ್ರಾಬಲ್ಯ ಹೊಂದಿರುವ ಮುಂಬಯಿ ರಾಜ್ಯದ ಬಹಳಷ್ಟು ಪ್ರದೇಶದಲ್ಲಿ ಕನ್ನಡ ಭಾಷೆಯೇ ಇರುತ್ತಿತ್ತು. ಮಹಾರಾಷ್ಟ್ರದಲ್ಲಿ ಸಿಕ್ಕಿರುವ ನೂರಕ್ಕೆ 85% ರಷ್ಟು ಶಿಲಾಶಾಸನಗಳು ಕನ್ನಡದಲ್ಲಿಯೇ ಇದ್ದವು. ಶೇ 10 ರಷ್ಟು ಮಾತ್ರ ಮರಾಠಿಯಲ್ಲಿದ್ದವು. ಮಿಕ್ಕುಳಿದ 5 ರಷ್ಟು ಶಿಲಾಶಾಸನಗಳು ಪ್ರಾಕೃತದಲ್ಲಿ ಇದ್ದವು.
ಬಹಳಷ್ಟು ಶಿಲಾಶಾಸನಗಳು ಕನ್ನಡದಲ್ಲಿ ಇದ್ದವೆಂದ ಮೇಲೆ ಅವು ಇದ್ದ ಪ್ರದೇಶದಲ್ಲಿ ಜನರು ಕನ್ನಡ ಮಾತನಾಡುತ್ತಿದ್ದರೆನ್ನುವುದು ಲಭ್ಯವಾಗುತ್ತದೆ.
ಮುಂಬಯಿ ದ್ವೀಪವನ್ನು ಆಗ ಪೋರ್ತುಗೀಸರು ಕೈವಶಪಡಿಸಿಕೊಂಡಿದ್ದರು. ಆ ಕಾಲದಲ್ಲಿ ಪೋರ್ತುಗೀಸ ರಾಜಪುತ್ರಿಯನ್ನು ಬ್ರಿಟಿಷ ರಾಜಪುತ್ರನಿಗೆ ಕೊಟ್ಟು ಮದುವೆ ಮಾಡಿದರು. ಆಗ ಪೋರ್ತುಗೀಸರು ಬ್ರಿಟಿಷ ರಾಜಪುತ್ರನಿಗೆ ವರದಕ್ಷಿಣೆ ಎಂದು ಮುಂಬಯಿ ದ್ವೀಪವನ್ನು ಕೊಟ್ಟರು.
ತಮಗೆ ಬಂದ ಮುಂಬಯಿ ದ್ವೀಪವನ್ನು ತೆಗೆದುಕೊಂಡು ತಾವೇನು ಮಾಡುವದಿದೆ ಎಂದು ಬ್ರಿಟಿಷರು “ಈಗ ಮುಂಬಯಿ ದ್ವೀಪದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕಾರಭಾರವು ನಡೆದಿದೆ. ಅವರೇ ಅಲ್ಲಿ ಕಾರಭಾರ ನಡೆಸಿಕೊಂಡು ಹೋಗಲಿ ಎಂದು ಅದನ್ನು ಈಸ್ಟ್ ಇಂಡಿಯಾ ಕಂಪನಿಯವರಿಗೆ ಕೊಟ್ಟರು. ಆಗ ಆ ಕಂಪನಿಯವರು ತಮ್ಮೊಂದಿಗೆ ವ್ಯವಹಾರ ಮಾಡುತ್ತಿದ್ದ ಜನರಿಗೆ ಒಂದು ಜಾಹಿರನಾಮೆ ಕೊಟ್ಟು ತಿಳಿಸಿದರು. ಅದರಲ್ಲಿ ಅವರು ಹೇಳಿದುದೇನೆಂದರೆ “ತಮ್ಮೊಂದಿಗೆ ವ್ಯವಹಾರ ಮಾಡುತ್ತಿರುವವರು ಪೋರ್ತುಗೀಸ ಭಾಷೆಯಲ್ಲಿ ಇಲ್ಲವೆ ಕನ್ನಡ ಭಾಷೆಯಲ್ಲಿ ವ್ಯವಹಸರಿಸಬೇಕೆಂದು ತಿಳಿಸಿದರು”.
ಅಂದರೆ ಒಂದು ಮಾತು ಸ್ಪಷ್ಟವೆನಿಸುತ್ತದೆ. 1365 ರಲ್ಲಿ ಮುಂಬಯಿ ದ್ವೀಪದಲ್ಲಿ ಕನ್ನಡ ಇದ್ದಿತ್ತು. ಮರಾಠಿ ಇರಲಿಲ್ಲ ಎನ್ನುವುದು ಸ್ಪಷ್ಟವೆನಿಸುತ್ತದೆ. ಬ್ರಿಟಿಷ ಅಧಿಪತ್ಯ ಮುಂಬಯಿ ದ್ವೀಪದಲ್ಲಿ ಇರುವವರೆಗೆ ಅಲ್ಲಿ ಕನ್ನಡವೇ ಆಡಳಿತ ಭಾಷೆ ಆಗಿದ್ದಿತು. ಮುಂಬಯಿಯ ಮೊದಲ ಗವರ್ನರ್ ಆಗಿ ಬಂದಿದ್ದು ಸರ್ ವಿಲಿಯಂ ವೆಲ್ಪಿನ್‍ಸ್ಟನ್ ಇವರಿಗೆ ಮುಂಬಯಿ ನಗರದಲ್ಲಿ ಕೊಡಲಾದ ಮೊಟ್ಟ ಮೊದಲ ಮಾನ ಪತ್ರವು ಮರಾಠಿಯಲ್ಲಿ ಇರಲಿಲ್ಲ. ಅದು ಕನ್ನಡದಲ್ಲಿ ಇದ್ದಿತು. ಈ ಮಾತನ್ನು ಆಗಿನ ಮುಂಬಯಿಯ ಮಂತ್ರಿಯಾಗಿದ್ದ ದಿವಾನ್ ಬಹದ್ದೂರ ಸಿದ್ಧಪ್ಪ ಕಂಬಳಿಯವರು ಇದನ್ನು 1935 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಭಾಷಣದಲ್ಲಿ ತಿಳಿಸಿದ್ದಾರೆ.

– ಡಾ. ಪಾಟೀಲ ಪುಟ್ಟಪ್ಪ
ಕನ್ನಡ, ಮರಾಠಿ ಬಗ್ಗೆ ಡಾ. ಪಾಟೀಲ ಪುಟ್ಟಪ್ಪ ಪತ್ರ ಕನ್ನಡ, ಮರಾಠಿ ಬಗ್ಗೆ ಡಾ. ಪಾಟೀಲ ಪುಟ್ಟಪ್ಪ ಪತ್ರ Reviewed by MediaMind24x7 Team on March 08, 2018 Rating: 5

No comments:

Powered by Blogger.