Contact For Add

ಕರ್ನಾಟಕಕ್ಕೆ ಅಧಿಕೃತ ಧ್ವಜ


ಕರ್ನಾಟಕವನ್ನು ಪ್ರತಿಬಿಂಬಿಸುವ ಅಧಿಕೃತ ಧ್ವಜವನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಬಳಕೆ ಮಾಡುವ ಸಂಬಂಧ ಸಿದ್ಧರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿದ್ದಾರೆ. ಅದಕ್ಕೆ ಒಪ್ಪಿಗೆ ಸಿಕ್ಕ ಬಳಿಕ ಧ್ವಜವು ಅಧಿಕೃತವಾಗಿ ರಾಜ್ಯದಾದ್ಯಂತ ಹಾರಾಡಲಿದೆ.

ಹಳದಿ ಬಿಳಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡ ತ್ರಿವರ್ಣ ಧ್ವಜದ ಮಧ್ಯೆ ನೀಲಿ ಬಣ್ಣದಲ್ಲಿ ರಾಜ್ಯ ಲಾಂಛನ ಗಂಡ ಭೇರುಂಡ ಇರುವ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಅಧಿಕೃತವಾಗಿ ಬಳಸಲು ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಮಾ.8ರಂದು ಮುಖ್ಯಮಂತ್ರಿಯವರು ರಾಜ್ಯದ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಸಭೆ ನಡೆಸಿದರು.
ನಾಡಧ್ವಜವನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಕ್ಕೆ ಒಂದು ನಾಡಧ್ವಜ ಬೇಕು ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಇದು ಕನ್ನಡಿಗರ ಅಪೇಕ್ಷೆಯೂ ಆಗಿತ್ತು. ಅದಕ್ಕೆ ನಮ್ಮ ಸರ್ಕಾರ ಧ್ವನಿಯಾಗುವುದರ ಜೊತೆಗೆ ರಾಜ್ಯಕ್ಕೆ ನಮ್ಮದೇ ಆದ ನಾಡಧ್ವಜ ಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ ಎಂದು ಹೇಳಿದರು.


ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರೂ ಆಗಿರುವ ಪಾಟೀಲ ಪುಟ್ಟಪ್ಪ ಅವರೂ ನಾಡಧ್ವಜ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಒಂದು ಸಮಿತಿ ರಚಿಸಲಾಗಿತ್ತು.

ಕಾನೂನು ಪರಿಸ್ಥಿತಿ, ಸಂವಿಧಾನದಲ್ಲಿ ಇರುವ ಅವಕಾಶ, ನಮ್ಮ ಕನ್ನಡ ಬಾವುಟದ ಬಗ್ಗೆ ಇರುವ ಇತಿಹಾಸ ಈ ಎಲ್ಲದರ ಬಗ್ಗೆ ಸಮಿತಿ ಅಧ್ಯಯನ ಮಾಡಿ ನಾಡಧ್ವಜ ಮತ್ತು ಅದರ ವಿನ್ಯಾಸ ಕುರಿತು ಸರ್ಕಾರಕ್ಕೆ ವರದಿ ಕೊಟ್ಟಿದೆ. ಆ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದಾಗ ಪ್ರತ್ಯೇಕ ಧ್ವಜ ನಮಗೆ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಕುರಿತು ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಂಪುಟ ತಮಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಭೆ ಕರೆದು ಚರ್ಚಿಸಲಾಗಿದ್ದು, ಸಮಿತಿ ಸಿದ್ಧಪಡಿಸಿರುವ ನಾಡಧ್ವಜ ಮತ್ತು ಅದರ ವಿನ್ಯಾಸಕ್ಕೆ ಸಹಮತ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಕನ್ನಡ ಬಾವುಟದಲ್ಲಿನ ಹಳದಿ ಮತ್ತು ಕೆಂಪು ಬಣ್ಣದ ಜೊತೆಗೆ ಶಾಂತಿಯ ಸಂಕೇತವಾದ ಬಿಳಿಯ ಬಣ್ಣವನ್ನು ಸೇರಿಸಿಕೊಂಡು ನಾಡಧ್ವಜದ ವಿನ್ಯಾಸ ರಚಿಸಲಾಗಿದೆ. ಬಿಳಿಯ ಬಣ್ಣದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನ ಇರಲಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.
ಕರ್ನಾಟಕಕ್ಕೆ ಅಧಿಕೃತ ಧ್ವಜ ಕರ್ನಾಟಕಕ್ಕೆ ಅಧಿಕೃತ ಧ್ವಜ Reviewed by MediaMind24x7 Team on March 08, 2018 Rating: 5

No comments:

Powered by Blogger.