Contact For Add

ಸಾಲ ಮಾಡಿ ತಲೆಮರೆಸಿಕೊಂಡವವರಿಗೆ ಶಿಕ್ಷೆಯಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ


ಧಾರವಾಡ ಕೆಸಿಸಿ ಬ್ಯಾಂಕ್ ಶತಮಾನೋತ್ಸವ: ಸಹಕಾರ ರಂಗದ ಅಭಿವೃದ್ಧಿಗೆ ಸರಕಾರದ ಬೆಂಬಲ ಸಾಲ ಮಾಡಿ ತಲೆಮರೆಸಿಕೊಂಡು ದೇಶಕ್ಕೆ ವಂಚನೆ ಮಾಡುವವರಿಗೆ ಶಿಕ್ಷೆಯಾಗಬೇಕು - ಮುಖ್ಯಮಂತ್ರಿ ಸಿದ್ದರಾಮಯ್ಯ 

ಧಾರವಾಡ (ಕರ್ನಾಟಕ ವಾರ್ತೆ) ಮಾ.೩: ಬ್ಯಾಂಕುಗಳಿಂದ ಸಾಲ ಪಡೆದು ಪರಾರಿಯಾಗುವವರನ್ನು ನಿಯಂತ್ರಿಸಲು ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮವಹಿಸಬೇಕು. ಬ್ಯಾಂಕ್ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಉಳಿಯುವಂತೆ ಮಾಡಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಶ್ರೀ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸೆಂಟ್ರಲ್ ಕೋ- ಆಪರೇಟಿವ್ ಬ್ಯಾಂಕ್ ಶತಮಾನೋತ್ಸವದ ಆಡಳಿತ ಭವನದ ಶಂಕುಸ್ಥಾಪನೆ ಹಾಗೂ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಒಂದು ಸಹಕಾರಿ ಸಂಸ್ಥೆ ನೂರು ವರ್ಷ ಪೂರೈಸಿದ್ದು ದೊಡ್ಡ ಸಾಧನೆ, ಈ ಅವಧಿಯಲ್ಲಿ ಅದನ್ನು ಪೋಷಿಸಿ, ಬೆಳೆಸಿದ ಸಹಕಾರಿ ಧುರೀಣರ ಕಾರ್ಯ ಅಭಿನಂದನೀಯವಾದುದು. ನಾಡಿನ ಜನತೆಗೆ ಕೆಸಿಸಿ ಬ್ಯಾಂಕ್ ಶತಮಾನೋತ್ಸವದ ಶುಭಾಶಯಗಳು, ನೂರು ವರ್ಷವೆಂದರೆ ಮೂರರಿಂದ ನಾಲ್ಕು ತಲೆಮಾರಿನ ಜನ ಇದಕ್ಕೆ ಸೇವೆ ಮಾಡಿರುತ್ತಾರೆ. ಒಬ್ಬ ಮನುಷ್ಯನಿಗೆ ನೂರು ವರ್ಷ ತುಂಬಿದರೆ ಆತ ದೈಹಿಕವಾಗಿ ದುರ್ಬಲವಾಗುತ್ತಾನೆ. ಆದರೆ ಸಂಸ್ಥೆಗೆ ನೂರು ವರ್ಷ ತುಂಬಿದರೆ ಅದು ಬಲಿಷ್ಠವಾಗುತ್ತದೆ. ಕೆಸಿಸಿ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಸತತ ನಾಲ್ಕು ವರ್ಷಗಳಿಂದ ಅದು ಲಾಭದಲ್ಲಿದೆ. ಬ್ಯಾಂಕ್ ವ್ಯಾಪಕವಾಗಿ ಬೆಳೆದು ರೈತರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಸಹಾಯ ಮಾಡಲಿ. ಕಣಗಿನಹಾಳದಲ್ಲಿ ೧೯೦೫ ರಲ್ಲಿ ಸಿದ್ದನಗೌಡ ಪಾಟೀಲ ಮೊದಲ ಸಹಕಾರ ಬ್ಯಾಂಕ್ ಸ್ಥಾಪಿಸಿ, ಸಹಕಾರದ ಬೀಜ ಬಿತ್ತಿದರು. ಅದು ಇದು ದೇಶದಾದ್ಯಂತ ಬೆಳೆದಿದೆ. ಕರ್ನಾಟಕ ಸರಕಾರ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ,ಬೆಂಬಲ ನೀಡುತ್ತಿದೆ. ರೈತರು, ಮಹಿಳೆಯರು, ನೇಕಾರರು, ಹಾಲು ಉತ್ಪಾದರು,ಮೀನುಗಾರರಿಗೆ ಕಡಿಮೆ ಬಡ್ಡಿ ಹಾಗೂ ಬಡ್ಡಿರಹಿತ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಕೆಸಿಸಿ ಬ್ಯಾಂಕ್ ವ್ಯಾಪ್ತಿಯ ೮೨ ಸಾವಿರ ರೈತರಿಗೆ ಸೇರಿದ ೨೮೦ ಕೋಟಿ ರೂ.ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿದೆ. ನೇಕಾರರು, ಮೀನುಗಾರರು, ಕುರಿಗಾರರ ಸಾಲವನ್ನು ಸಹ ಮನ್ನಾ ಮಾಡಲಾಗಿದೆ. ಮನ್ನಾ ಮಾಡಿದ ಹಣವನ್ನು ಬ್ಯಾಂಕುಗಳಿಗೆ ಜೂನ್ ಒಳಗಾಗಿ ಪಾವತಿಸಲಾಗುವದು. ಇದರಲ್ಲಿ ಸರಕಾರ ಸ್ಪಷ್ಟವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೆಸಿಸಿ ಬ್ಯಾಂಕ್ ಶತಮಾನೋತ್ಸವ ಆಡಳಿತ ಭವನಕ್ಕೆ ೫ ಕೋಟಿ ರೂ.ಒದಗಿಸಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವ ಹೆಚ್.ಕೆ.ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಜವಳಿ ಮತ್ತು ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ ಅವರು ಸಾಲದ ಚೆಕ್ ವಿತರಿಸಿದರು.
ಗಣಿ, ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಶತಮಾನೋತ್ಸವ ಠೇವು ಸರ್ಟಿಫಿಕೇಟ್ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಕುರಿ ಸಾಕಾಣಿಕೆ ಸಾಲದ, ಕೃಷಿ ಸಾಲಮನ್ನಾ ಯೋಜನೆ ಫಲಾನುಭವಿಗಳಿಗೆ, ಹೈನುಗಾರಿಕೆ ಸಾಲದ ಚೆಕ್ ಹಾಗೂ ಮಹಿಳಾ ಸ್ವಸಹಾಯ ಸಂಘದ ಗುಂಪುಗಳಿಗೆ ಸಾಲದ ಚೆಕ್ ಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು.
ಇದೆ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಕಾರಣಿಬೂತರಾದ ಸಂಸ್ಥಾಪಕರುಗಳಾದ ದಿವಾನ್ ಬಹ್ದೂರ, ಎಸ್.ವ್ಹಿ.ಮೆಣಸಿನಕಾಯಿ ಹಾಗೂ ರಾವ್‌ಬಹ್ದೂರ್, ರುದ್ರಗೌಡ ಅರಟಾಳ ಹಾಗೂ ವ್ಹಿ.ಎಸ್.ಬಸವನಾಳ, ಜಿ.ಆರ್.ನಲವಡಿ ಮಹನಿಯರ ಕುಟುಂಬ ವರ್ಗದವರನ್ನು ಮತ್ತು ಬ್ಯಾಂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ, ಅಧಿಕಾರಿಗಳಿಗೆ, ಸಹಕಾರಿಗಳಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಶಾಸಕರಾದ ಜಿ.ಎಸ್.ಪಾಟೀಲ, ರಾಮಕೃಷ್ಣ ದೊಡ್ಡಮನಿ, ಎನ್.ಹೆಚ್.ಕೋನರಡ್ಡಿ, ಶ್ರೀನಿವಾಸ ಮಾನೆ, ಗೋವಿಂದರಾಜು, ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ.ಪಾಟೀಲ, ಮುಖಂಡರಾದ ಪ್ರೊ.ಐ.ಜಿ.ಸನದಿ, ವೀರಣ್ಣ ಮತ್ತಿಕಟ್ಟಿ, ಎಸ್.ಎಸ್.ಪಾಟೀಲ, ಡಿ.ಆರ್. ಪಾಟೀಲ, ವಾಸಣ್ಣ ಕುರಡಗಿ, ನೀಲಕಂಠ ಅಸೂಟಿ, ಉಮೇಶ ಹೆಬಸೂರ, ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೆ.ಸಿ.ಸಿ ಬ್ಯಾಂಕ್ ವತಿಯಿಂದ ಬೆಳ್ಳಿ ಗಧೆ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಬ್ಯಾಂಕ್ ಆಡಳಿತ ಮಂಡಳಿ ಸದಸ್ಯ ಕೆ.ಆರ್.ಬಸೇಗಣ್ಣಿಸ್ವಾಗತಿಸಿದರು. ಅಧ್ಯಕ್ಷ ಐ.ಎಸ್.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಹರ್ಲಾಪುರದ ಎಸ್.ಎಸ್.ಹಿರೇಮಠ ಹಾಗೂ ತಂಡದ ಸದಸ್ಯರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಪ್ರೊ. ಶಂಭು ಹೆಗಡ್ಯಾಳ ನಿರೂಪಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷರಾದ ಎಸ್.ವಾಯ್.ಪಾಟೀಲ ವಂದಿಸಿದರು.
ಸಾಲ ಮಾಡಿ ತಲೆಮರೆಸಿಕೊಂಡವವರಿಗೆ ಶಿಕ್ಷೆಯಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ  ಸಾಲ ಮಾಡಿ ತಲೆಮರೆಸಿಕೊಂಡವವರಿಗೆ ಶಿಕ್ಷೆಯಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ Reviewed by MediaMind24x7 Team on March 06, 2018 Rating: 5

No comments:

Powered by Blogger.